ಕಯಾಕೆಂಟ್ - ಖೊರೋಚೋಯ್ ಸಂಸ್ಕೃತಿ : ರಷ್ಯದ ಕಾಕೇಷಿಯ ಪ್ರದೇಶದಲ್ಲಿ ಕೋಬಾನ್ ಸಂಸ್ಕೃತಿಯೊಂದಿಗೆ ನೆಲಸಿದ್ದ ಕಂಚಿನ ಯುಗ ಸಂಸ್ಕೃತಿ. ಇದನ್ನು ಕೋಬಾನ್ ಸಂಸ್ಕೃತಿಯ ಪ್ರಾದೇಶಿಕ ವೈಪರೀತ್ಯವೆಂದು ಪರಿಗಣಿಸಲಾಗಿದೆ. 1936-39ರಲ್ಲಿ ಎ.ಸಿ. ಕ್ರುಗ್ಲಾಪ್ ಈ ಸಂಸ್ಕೃತಿಯನ್ನು ಬೆಳಕಿಗೆ ತಂದ. ಡಗೆಸ್ತಾನದ, ಕರಾವಳಿ ಮತ್ತು ಬೆಟ್ಟಪ್ರದೇಶಗಳಲ್ಲಿ ಈ ಸಂಸ್ಕೃತಿಗೆ ಸೇರಿದ ಅನೇಕ ಶ್ಮಶಾನಗಳೂ ವಸತಿಗಳೂ ಕಂಡುಬಂದಿವೆ. ಈ ಸಂಸ್ಕೃತಿಯನ್ನು ಪ್ರ.ಶ.ಪು. 9-7ನೆಯ ಶತಮಾನಗಳಿಗೆ ನಿರ್ದೇಶಿಸಲಾಗಿದೆ. ಉದ್ದನಾದ ಮತ್ತು ಬಾಗಿದ ಕಂಚಿನ ಕೊಡಲಿಗಳು, ತಾಮ್ರದ ಉಪಕರಣಗಳು ಮತ್ತು ವೈವಿಧ್ಯಮಯ ಆಭರಣಗಳು ಈ ಸಂಸ್ಕೃತಿಯ ಲಕ್ಷಣಗಳು. ಈ ಜನ ಕಲ್ಲಿನ ಶವತೊಟ್ಟಿಗಳಲ್ಲಿ ಮೃತರ ದೇಹವನ್ನು ಹೂತಿಡುತ್ತಿದ್ದರು. ಈ ಸಮಾಧಿಸ್ಥಳಗಳನ್ನು ಶಿಲಾವರ್ತುಲಗಳಿಂದ ಗುರುತಿಸಬಹುದಾಗಿತ್ತು. ವೃತ್ತಾಕಾರದ ಮರದ ತೊಟ್ಟಿಗಳನ್ನು ಉಪಯೋಗಿಸುತ್ತಿದ್ದುದೂ ಉಂಟು. ಮೃತರ ವೈಯಕ್ತಿಕ ಆಭರಣಗಳನ್ನೂ ಕೊರೆದ ಜ್ಯಾಮಿತೀಯ ಚಿತ್ರಗಳಿಂದ ಅಲಂಕೃತವಾದ ಮೃಣ್ಪಾತ್ರೆಗಳನ್ನೂ ಸಮಾಧಿಗಳಲ್ಲಿ ನಿಕ್ಷೇಪಿಸುತ್ತಿದ್ದರು. ಒಂದೊಂದು ಪಂಗಡಗಳಿಗೆ ಒಂದೊಂದು ಸ್ಮಶಾನಗಳಿದ್ದವು. ಗಂಡಸರ ಸಮಾಧಿಗಳ ಸುತ್ತ ಹೆಂಗಸರ ಮತ್ತು ಮಕ್ಕಳ ಸಮಾಧಿಗಳನ್ನು ನಿರ್ಮಿಸಲಾಗುತ್ತಿತ್ತು. ಇವರ ಮುಖ್ಯ ವೃತ್ತಿ ಪಶುಪಾಲನೆ.	 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ